ಕರುನಾಡ ತಾಯಿ ಸದಾ ಚಿನ್ಮಯಿ. ಈ ಪುಣ್ಯಭೂಮಿ ನನ್ನ ದೇವಾಲಯ
ನಾನು ಹುಟ್ಟಿದ್ದು ಆಂಧ್ರಪ್ರದೇಶದ, ಅನಂತಪುರ ಜಿಲ್ಲೆಯ, ಗುತ್ತಿ ತಾಲೂಕಿನ, ರಾಮರಾಜುಪಲ್ಲಿ ಎಂಬುವ ಗ್ರಾಮದಲ್ಲಿ. ೨೦ ವರ್ಷದ ವಯಸ್ಸಿನ ವರೆಗೂ ಬೆಳೆದಿದ್ದು ಗುತ್ತಿ ಯಲ್ಲಿ. ತದನಂತರ ಸೇರಿದ್ದು ಅನಂತಪುರ ಪಟ್ಟಣ. ಆದಕಾರಣ, ಓದಿದ್ದು ತೆಲುಗು ಮಾಧ್ಯಮ ದಲ್ಲಿ. ಅವು, ಶೇಕ್ಸ್ಪಿಯರ್ ಬರೆದ ಪದ್ಯಗಳು ಸಹಾ ತೆಲುಗು ಭಾಷೆಯಲ್ಲಿ ಹೇಳಿಕೊಡುವ ದಿನಗಳು.
ನಾನು ಹುಟ್ಟಿದ್ದು, ೨೫ ವರ್ಷಗಳ ವಯಸ್ಸಿನ ವರೆಗೂ ಬೆಳೆದಿದ್ದು ಆಂಧ್ರಪ್ರದೇಶ ದಲ್ಲಿ ಆದರೂ ಸಹಾ, ನನ್ನ ಮಾತೃಭಾಷೆ ಕನ್ನಡ ಆಗಿದ್ದರಿಂದ, ಕನ್ನಡ ಮಾತನಾಡಲು ಬರುತ್ತಿತ್ತು. ಬರೆಯಲು ಗೊತ್ತಿರಲಿಲ್ಲ. ನನ್ನ ತಂದೆಯ ಪೂರ್ವಜರು ಕರ್ಣಾಟಕ ರಾಜ್ಯದ ಹೂವಿನಹಡಗಲಿಗೆ ಸೇರಿದವರು. ನೂರಾರು ವರ್ಷಗಳ ಹಿಂದೆ ಆಂಧ್ರಪ್ರದೇಶಕ್ಕೆ ವಲಸೆ ಹೋದರಂತೆ. ನನ್ನ ತಾಯಿ ಕರ್ಣಾಟಕ ರಾಜ್ಯದ ಕೋಲಾರ ಜಿಲ್ಲೆಯ, ಗೌರಿಬಿದನೂರು ತಾಲೂಕಿನ, ಹುಣಸೇನಹಳ್ಳಿ ಗ್ರಾಮಕ್ಕೆ ಸೇರಿದವರು.
೧೯೮೦ ಇಸವಿಯಲ್ಲಿ, ಕೇಂದ್ರ ಸರ್ಕಾರದ, ಸ್ಟಾಪ್ ಸೆಲೆಕ್ಷನ್ ಕಮೀಶನ್ ಸ್ಪರ್ಥಾ ಪರೀಕ್ಷೆ ಬರೆಯಲು, ಬೆಂಗಳೂರು ನಗರವನ್ನು ವೀಕ್ಷಿಸಲು, ಬೆಂಗಳೂರನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿದೆ. ಅದು ನನ್ನ ಜೀವನದ ಮೊದಲ ಸ್ಪರ್ಥಾ ಪರೀಕ್ಷೆ ಆಗಿತ್ತು. ನಾನು ಪರೀಕ್ಷೆ ಬರೆದಿದ್ದು ವಿಧಾನಸೌಧ ಬಾಂಕೆಟ್ ಹಾಲಿನಲ್ಲಿ. ನನ್ನ ಈ ಮೊದಲನೇ ಪರೀಕ್ಷೆಯಲ್ಲೇ ತೇರ್ಗಡೆಯಾಗಿ ೧೯೮೨ ಇಸವಿಯಲ್ಲಿ ನನಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕಿತು. ನನ್ನ ಮೊದಲನೆ ಪೋಸ್ಟಿಂಗ್ ಕರ್ಣಾಟಕ ರಾಜ್ಯದ, ದಾವಣಗೆರೆ. ಬಹುಶಃ, ನನ್ನ ಪೂರ್ವಜರು ನೆಲೆಸಿದ ನಾಡಿಗೆ ನಾನು ಮರಳಿ ಬಂದೆ ಅನ್ನಿಸುತ್ತೆ.
ಎಲ್ಲಾ ಪೂರ್ವ ತಯಾರಿಯಲ್ಲಿ, ೨೬-೫-೧೯೮೨, ಬೆಳಿಗ್ಗೆ ೮ ಘಂಟೆಗೆ ಅನಂತಪುರ ಯಿಂದ ದಾವಣಗೆರೆಗೆ ಬಸ್ಸಿನಲ್ಲಿ ಹೊರಟೆ. ಬಳ್ಳಾರಿಯಲ್ಲಿ ದಾವಣಗೆರೆ ಬಸ್ಸು ಹತ್ತಿದೆ. ಮಾರ್ಗಮಧ್ಯದಲ್ಲಿ ಚಳ್ಳಕೆರೆಯಲ್ಲಿ ಮಧ್ಯಾಹ್ನ ಊಟಸಹಾ ಮುಗಿಸಿದೆ. ಬಸ್ಸು ದಾವಣಗೆರೆ ತಲುಪಿದಾಗ ಸಂಜೆ ಸುಮಾರು ೬ ಘಂಟೆ ಸಮಯವಾಗಿತ್ತು. ಬಸ್ಸು ನಿಲ್ದಾಣದಿಂದ, ಆಟೋ ರಿಕ್ಷಾದಲ್ಲಿ ಪಿ.ಜೆ. ಬಡಾವಣೆ, ರೈತರ ಬೀದಿ ಯಲ್ಲಿರುವ, ಶ್ರೀ ಡಿ.ಆರ್. ಗುರುರಾಜಾ ರಾವ್ ಅವರ ಮನೆಗೆ ಹೊರಟೆ. ಅವರ ಮನೆ ತಲುಪಿದಾಗ, ಸರ್ಕಾರದ ನಲ್ಲಿ ಕನೆಕ್ಷನ್ ಕೊಡುತ್ತಿದ್ದರು. ನಾನು ಅವರ ಮನೆ ಅಂಗಳದಲ್ಲಿ ಪಾದಾರ್ಪಣೆ ಮಾಡಿದಸಮಯದಲ್ಲೇ ನಲ್ಲಿ ಯಲ್ಲಿ ನೀರು ಸಹಾ ಬಂತು. ಹಾಗಾಗಿ, ಅವರ ಕುಟುಂಬ ಸದಸ್ಯರು "ಓ, ಇವನು ಭಗೀರಥ ಅಂತ ಅನ್ಸುತ್ತೆ. ಸರಿಯಾಗಿ ಇವನು ಮತ್ತು ನೀರು, ಒಂದೇ ಸಮಯದಲ್ಲಿ ಬಂದಿದೆ" ಅಂತ ಎನ್ನುವುದೇ. ಕುಟುಂಬ ಸದಸ್ಯರ ಪರಿಚಯ, ಕಾಫೀ ಸೇವನೆ ಆಯಿತು. ಗುರುರಾಜ ರಾವ್ ಅವರ ಹಿರಿಯ ಮಗ ವೆಂಕಟೇಶ್ ನನ್ನ ಸುತ್ತಾಡಲು ಹೊರಗೆ ಕರೆದುಕೊಂಡು ಹೋದರು.
ಶ್ರೀ ಗುರುರಾಜ ರಾವ್ ಅವರು ವಕೀಲರು. ಅವರ ಹೆಂಡತಿ ಶ್ರೀಮತಿ ಲಲಿತಮ್ಮ ನವರು ನನಗೆ ಯಶೋದೆ ಆದರು. ನನಗೆ, "ನಾನಿ" ಅಂತ ನಾಮಕರಣ ಮಾಡಿದರು. ಅವರ ಮಕ್ಕಳು ವೆಂಕಟೇಶ್, ಸುಂದರೇಶ್, ರಾಜೇಂದ್ರ ಬಾಬು, ವಿಜಯಾ ಎಲ್ಲರೂ ನನಗೆ ದೇವರು ಕೊಟ್ಟ ಇನ್ನೊಂದು ಕುಟುಂಬ ಆಯಿತು. ನನಗೆ ಬೇರೆ ವ್ಯವಸ್ಥೆ ಆಗುವವರೆಗೆ, ಮೂರ್ನಾಲ್ಕು ದಿನ ಮಟ್ಟಿಗೆ ಅವರ ಮನೇಲಿ ಇರಬೇಕೆಂಬ ನನ್ನ ಆಲೋಚನೆ ಕಾರ್ಯಗತಗೊಳಿಸಲು ಆಗಲೇ ಇಲ್ಲ. ವೆಂಕಟೇಶ್, ಸುಂದರೇಶ್, ವಿಜಯ್, ಇವರ ಮದುವೆ ಆದನಂತರವೇ, ಅದೇನೋ ಸುಳ್ಳು ಹೇಳಿ ಅವರ ಮನೇ ಯಿಂದ, ಹೊರ ಬಂದು, ನನ್ನ ಸಹೋದ್ಯೋಗಿಗಳ ಜೊತೆ ಬೇರೆ ಮನೆ ಸೇರಿಕೊಂಡೆ. ಎಲ್ಲಾ ಕುಟುಂಬ ಸದಸ್ಯರು ನನ್ನನ್ನು ಅವರ ಮನೆ ಮಗನಂತೆ ನೋಡಿಕೊಳ್ಳುತ್ತಿದ್ದರು. ವೆಂಕಟೇಶ್ ಅವರ ಹೆಂಡತಿ ವನಜಾ ಅವರನ್ನು ನಾನು ಅತ್ತಿಗೆ ಅಂತಲೇ ಕರಿಯುತ್ತಿದ್ದೆ. ಅದಕ್ಕೆ, ವನಜಾ ಅವರು ತುಂಬಾ ಸಂತೋಷಪಡುತ್ತಿದ್ದರು. ಬಾಯಿ ಬಿಚ್ಚಿ ಹೇಳದಿದ್ದರೂ, ಕೇಳದಿದ್ದರೂ ಸಹಾ, ತಾನೇ ಅರಿತು, ಸುಂದರೇಶ್ ನನ್ನ ಕಷ್ಟಕ್ಕೆ ಸ್ಪಂದಿಸಿ ಒಂದೆರಡು ಬಾರಿ, ಹಣ ಸಹಾಯವೂ ಮಾಡಿದ್ದರು. ರಾಜೇಂದ್ರ ಬಾಬು ನನ್ನ ಸ್ವಂತ ತಮ್ಮನ ತರಾ ಇದ್ದ. ನಾನು ಅವನು ಸೇರಿ, ವೆಂಕಟೇಶ್ ಸುಂದರೇಶ್ ಅವರನ್ನು ಕೀಟಲೆ ಮಾಡಿದ ಎಷ್ಟೋ ಸನ್ನಿವೇಶಗಳು ಇನ್ನೂ ಹಚ್ಚಹಸಿರಾಗಿ ನನ್ನ ಮನದಂಗಳದಲ್ಲಿ ಜೀವಂತವಾಗಿ ಉಳಿದಿವೆ.
ಆಂಧ್ರಪ್ರದೇಶದಲ್ಲಿ ನಾನು ಬೆಳೆದ ವಾತಾವರಣ ತುಂಬಾ ವಿಭಿನ್ನವಾಗಿ ಇತ್ತು. ಮಡಿವಂತಿಕೆಗೆ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಇತ್ತು. ನಾನು ಸಹಾ ತುಂಬಾ ಮಿತಭಾಷಿ ಆಗಿದ್ದೆ. ಅನಂತಪುರದಿಂದ ಹೊರಬಂದಾಗ ಪಂಜರದಿಂದ ಹೊರಗೆ ಬಂದ ಗಿಣಿ ಯಾಗಿದ್ದೆ. ಭಾವಿ ಯಿಂದ ನದಿಯಲ್ಲಿ ಬಿದ್ದ ಕಪ್ಪೆಯಂತಾಗಿತ್ತು. ದಾವಣಗೆರೆಗೆ ಬಂದಮೇಲೆ ನನ್ನ ಮೈಛಳಿ ಬಿಟ್ಟು ಹೋಯಿತು.
ದಾವಣಗೆರೆಯಲ್ಲಿ 26-5-1982 ಯಿಂದ 27-7-1986 ಕೆಲಸ/ವಾಸ.
ಬೆಳಗಾವಿಯಲ್ಲಿ 28-7-1986 ಯಿಂದ 9-12-1987 ಕೆಲಸ/ವಾಸ.
ಬೆಂಗಳೂರುನಲ್ಲಿ 10-12-87 ಯಿಂದ 19-7-2009 ಕೆಲಸ/ವಾಸ.
ಮಂಗಳೂರಿನಲ್ಲಿ 20-7-2009 ಯಿಂದ 31-5-2010 ಕೆಲಸ/ವಾಸ.
ಬೆಂಗಳೂರುನಲ್ಲಿ 1-6-2010 ಯಿಂದ 29-7-2012 ಕೆಲಸ/ವಾಸ.
ಮಂಗಳೂರಿನಲ್ಲಿ 30-7-2012 ಯಿಂದ 31-12-2016 ಕೆಲಸ/ವಾಸ. ಮಂಗಳೂರಿನಲ್ಲಿ 1-1-2017 ಯಿಂದ 6-1-2017 ವಾಸ.
ಬೆಂಗಳೂರು ನಲ್ಲಿ 7-1-2017 ಯಿಂದ ವಾಸ.
ನೂರಾರು ವರ್ಷಗಳ ಹಿಂದೆ ನನ್ನ ಪೂರ್ವಜರು ಬಿಟ್ಟು ಹೋದ ಕರ್ಣಾಟಕಕ್ಕೆ ನಾನು ಬಂದು ಈ ದಿನ ಸಂಜೆ ೬ ಘಂಟೆಗೆ ಸರಿಯಾಗಿ ೩೯ ವರ್ಷ ಆಯ್ತು. ಈ ಪುಣ್ಯಭೂಮಿಯೇ ನನ್ನ ದೇವಾಲಯ. ಅದರಲ್ಲೂ, ದಕ್ಷಿಣ ಕನ್ನಡದ ಕೆಲವು ಪ್ರದೇಶಗಳಾದ "ಧರ್ಮಸ್ಥಳ, ಕುಕ್ಕೆ, ಬೆಲ್ತಂಗಡಿ, ಗುರುವಾಯನಕೆರೆ, ಶೃಂಗೇರಿ, ಹೊರನಾಡು,ಮಂಗಳೂರು, ಉಡುಪಿ" ಹೆಸರು ಕೇಳಿದರೆ ನನಗೆ ರೋಮಾಂಚನ ಆಗುತ್ತದೆ. ನಾನು ಪೂರ್ವ ಜನ್ಮದಲ್ಲಿ ಇಲ್ಲೇ ಎಲ್ಲೋ ಹುಟ್ಟಿರಬಹುದು ಎಂದು ಮನಸ್ಸಿಗೆ ಅನ್ನಿಸುತ್ತದೆ. ಈ ಜನ್ಮದಲ್ಲಿ ಈ ಭೂತಾಯಿಯ ಮಡಿಲಲ್ಲಿ ಐಕ್ಯವಾಗುವ ಭಾಗ್ಯ ನನ್ನದಾಗಿದೆ.
ಕರುನಾಡ ತಾಯಿ ಸದಾ ಚಿನ್ಮಯಿ. ಈ ಪುಣ್ಯಭೂಮಿ ನನ್ನ ದೇವಾಲಯ, ನನ್ನ ಪ್ರೇಮಾಲಯ❤️

ತುಂಬಾ ಚೆನ್ನಾಗಿ ನಿರೂಪಣೆ ಮಾಡಿರುವಿರಿ. ಉಪಕಾರ ಮಾಡಿದವರ ಸ್ಮರಣೆ ಮಾಡುವುದು ನಿಮ್ಮ ಒಳ್ಳೆಯ ಸಂಸ್ಕಾರ ತೋರಿಸುತ್ತದೆ. ನಿಮಗೆ ಜನ್ಮದಿನದ ಶುಭಾಶಯಗಳು.
ReplyDeleteI really appreciate your memory and memories Pinnappa. Your draft is highly professional.👏👏👌👌
ReplyDeleteThanks Prabhu and Padma ❤️
ReplyDeleteಅತಿ ಸುಂದರವಾದ ರಚನೆ. ನೆನಪಿನ ಪುಟಗಳು ಚಲನಚಿತ್ರ ನೋಡಿದಂತೆ ಇದೆ. Excellent narration Venkat.
ReplyDelete