ದಶರಥ ಸುಪುತ್ರಾ ರಾಮಾ
ದಶರಥ ಸುಪುತ್ರಾ ರಾಮಾ
ಮಾನವ ಸಂಬಂಧಗಳಾದ, ತಂದೆ, ತಾಯಿ, ಮಕ್ಕಳು, ಅಣ್ಣತಮ್ಮಂದಿರ ಅನ್ಯೋನ್ಯತೆ, ಪ್ರೀತಿ ಪ್ರೇಮ ಬಗ್ಗೆ ಸರಿಯಾದ ನಿರ್ವಚನ ಬೇಕಾದರೆ, ರಾಮಾಯಣ ಮಹಾಕಾವ್ಯವನ್ನು ಓದಬೇಕು. ದಶರಥ, ಶ್ರೀ ರಾಮ ಮತ್ತು ಸಹೋದರ ಪಾತ್ರಗಳು, ನನಗೆ ಜೀವನದಲ್ಲಿ ಮಾದರಿ ಆಗಿರುತ್ತವೆ. ತಂದೆ ಎಂದರೆ, ಮಗ ಎಂದರೆ, ಅಣ್ಣತಮ್ಮಂದಿರಂದರೆ ಹೇಗಿರಬೇಕು ಅಂತ ತೋರಿಸಿಕೊಟ್ಟ ಮಹಾನುಭಾವರು. ದಶರಥನು ಶ್ರೀರಾಮನ ಮೇಲೆ ಇಟ್ಟುಕೊಂಡಿರುವ ಪ್ರೀತಿಗಿಂತ ದೊಡ್ಡದು ನಮ್ಮ ತಂದೆಯವರು ನನ್ನ ಮೇಲೆ ಇಟ್ಟುಕೊಂಡಿರುವ ಪ್ರೀತಿ. ನಮ್ಮಿಬ್ಬರ ಪ್ರೀತಿ ಬಗ್ಗೆ ಹೇಳಬೇಕೆಂದರೆ, ರಾಮಾಯಣದ ತರಾ ಒಂದು ಮಧುರ ಕಾವ್ಯ ಆಗಬಹುದು. ಕೇಂದ್ರ ಸರ್ಕಾರ ನೌಕರಿ ನಿಮಿತ್ತ, ನಾನು ಅನಂತಪುರ ದಿಂದ ದಾವಣಗೆರೆಗೆ ಹೊರಟಿದ್ದು ೨೬-೫-೧೯೮೨. ನನಗೆ ಬೀಳ್ಕೊಡುವ ಸಲುವಾಗಿ, ನಮ್ಮ ತಂದೆ, ಅಜ್ಜಿ, ಮೂರೂ ಜನ ತಮ್ಮಂದಿರು, ಇಬ್ಬರೂ ತಂಗಿಯರು, ಬಸ್ ನಿಲ್ದಾಣಕ್ಕೆ ಬಂದಿದ್ದರು. ನನಗೆ ಆಗ ೨೫ ವರ್ಷ ವಯಸ್ಸು. ಸಾಂಪ್ರದಾಯಿಕ ವಾತಾವರಣದಿಂದ ವಿಭಿನ್ನ ಶೈಲಿಯ ಜೀವನಕ್ಕೆ ಪಾದಾರ್ಪಣೆ. ಪಂಜರದಲ್ಲಿ ಜೋಪಾನವಾಗಿ ಬೆಳೆದಿರುವ ಗಿಣಿಗೆ ಒಮ್ಮೆಲೇ ಮೈಚಳಿ ಬಿಟ್ಟ ಭಾವನೆ. ಬಿಸಿಯ ರಕ್ತ. ಕೇಂದ್ರ ಸರ್ಕಾರದ ಕೆಲಸ ಸಿಕ್ಕಿದ್ದ ಹುಮ್ಮಸ್ಸಿನಲ್ಲಿ, ದಾವಣಗೆರೆಗೆ ನಾನು ಹೊರಡುವಾಗ, ಶ್ರೀ ರಾಮ ದೂರ ವಾದಾಗ ದಶರಥ ಮಹಾರಾಜನು ಅನುಭವಿಸಿದ ನೋವಿಗಿಂತಲೂ, ಹೆಚ್ಚು ನೋವು ನಮ್ಮ ತಂದೆಯವರು ಅನುಭವಿಸಿದ್ದಾರೆ ಎಂದು ಅರಿವಾಗಿದ್ದು, ಒಂದು ವಾರದ ನಂತರ, ಅವರ ಪತ್ರ ನೋಡಿದಮೇಲೇನೆ.
ಪತ್ರದಲ್ಲಿ ತಂದೆಯವರು ಬರೆದಿದ್ದರು. " ನಿನ್ನ ಬೀಳ್ಕೊಟ್ಟು ಬಸ್ ನಿಲ್ದಾಣದಿಂದ ಮನೆಗೆ ವಾಪಸ್ ಬರುವಾಗ, ನನಗೆ ದಾರಿ ಸರಿಯಾಗಿ ಕಾಣಲಿಲ್ಲ. ಏಕೆಂದರೆ, ನನ್ನ ಎರಡೂ ಕಣ್ಣು ತುಂಬಾ ನೀರು ತುಂಬಿ ಕೊಂಡಿತ್ತು. ನೀನು ಇಲ್ಲಿಂದ ಹೋದಮೇಲೆ ನನ್ನ ಬಲಗೈಯನ್ನು ಮುರಿದು ಕೊಂಡ ಅನುಭವ ಆಗುತ್ತಿದೆ" ಅವತ್ತಿನಿಂದ ಇವತ್ತಿನವರೆಗೂ ನನ್ನ ತಂದೆ ತಾಯಿ ದೈಹಿಕವಾಗಿ ನಮ್ಮನ್ನಗಲಿದ್ದರೂ, ಮಾನಸಿಕವಾಗಿ ಮರೆಯಲಾಗದ ಒಂದು ಉದ್ವೇಗವಾಗಿದ್ದಾರೆ.
ನಾನು ಕೆಲಸಕ್ಕೆ ಸೇರಿ ದುಡಿಮೆ ಆರಂಭವಾದ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ, ನಮ್ಮ ತಂದೆ ಆಂಧ್ರಪ್ರದೇಶದ ಕಂದಾಯ ಇಲಾಖೆಯಲ್ಲಿ ಹಿರಿಯ ಗುಮಾಸ್ತ ಆಗಿದ್ದರು. ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಯಾಗಿದ್ದ ಯನ್.ಟಿ.ರಾಮಾರಾವು ಅವರು, ಫೆಬ್ರವರಿ ೧೯೮೩ ತಿಂಗಳಲ್ಲಿ, ಆಂಧ್ರಪ್ರದೇಶದ ಸರ್ಕಾರಿ ನೌಕರರ ಪದವೀ ನಿವೃತ್ತಿ ವಯಸ್ಸನ್ನು ೫೮ ವರ್ಷದಿಂದ ೫೫ ವರ್ಷಕ್ಕೆ ಇಳಿಸಿದರು. ನಮ್ಮ ತಂದೆಯವರು ೧೯೮೩ ಮಾರ್ಚ್ ತಿಂಗಳಲ್ಲಿ ಪದವಿ ನಿವೃತ್ತಿ ಹೊಂದಿದರು. ಆಗ ನಮ್ಮ ತಂದೆಯವರ ಬಳಿ ಬಂದು ನೂರು ರೂಪಾಯಿ ಸಹಾ ಇರ್ಲಿಲ್ಲ. ಆಗ ನನ್ನ ವಯಸ್ಸು ೨೬ ವರ್ಷ. ನನ್ನ ಮೂರು ಜನ ತಮ್ಮಂದಿರು ೨೪, ೧೭, ೧೪ ವರ್ಷದವರು ಆಗಿದ್ದರು. ಇಬ್ಬರು ತಂಗಿಯರಿಗೆ ೨೦, ೧೧ ವರ್ಷ. ಎಲ್ಲರ ಜವಾಬ್ದಾರಿ ನನ್ನ ಹೆಗಲ ಮೇಲೇ ಬಿತ್ತು. ನನಗೆ ಬರುತ್ತಿರುವ ೬೫೦ ರೂಪಾಯಿ ಸಂಬಳದಲ್ಲಿ ೪೦೦ ರೂಪಾಯಿ ಪ್ರತಿ ತಿಂಗಳು ಕಳುಹಿಸಲು ಆರಂಭಿಸಿದೆ. ನನ್ನ ತಂದೆಯವರ ಪಿಂಚಣಿ ಮತ್ತು ಇತರೇ ಮೊತ್ತಗಳು ಒಂದೂವರೆ ವರ್ಷ ಆದರೂ ಬರಲಿಲ್ಲ. ಅದಕ್ಕಾಗಿ ದೊಡ್ಡ ಸರ್ಕಸ್ ಮಾಡಬೇಕಾಗಿ ಬಂತು. ಇದರ ನಡುವೆ, ನನ್ನ ತಂಗಿ ಮದುವೆಯ ಹೊಣೆಗಾರಿಕೆ. ಅವಳಿಗೆ ಸಂಬಂಧ ಹುಡುಕುತ್ತಾ ಯಾರಮನೆಗೆ ಹೋದರೂ, ಅವರಲ್ಲಿ ಮದುವೆ ಆಗಬೇಕಾಗಿದ್ದ ಹುಡುಗಿ ಇರುತ್ತಾಳೆ. ಅವರ ಹುಡುಗಿ ಹುಡುಗನ್ನ, ಪರಸ್ವರ ವಿನಿಮಯದ ಪ್ರಸ್ತಾವನೆ ಮಾಡುತ್ತಾರೆ. ನಮ್ಮ ತಂದೆಯವರು ದಾವಣಗೆರೆಗೆ ಖುದ್ದಾಗಿ ಬಂದು ನನ್ನ ಅಂಗೀಕಾರ ಪಡೆಯುತ್ತಾರೆ. ಆ ದಿನದಿಂದ ನನ್ನ ಆಸೆ ಆಕಾಂಕ್ಷೆ ಬದಿಗೆ ಸರಿಸಿ, ನನಗೆ ಜನ್ಮಕೊಟ್ಟ ತಂದೆ ತಾಯಿ ಋಣ ತೀರಿಸಲು ಸಧೃಡಮನಸು ಮಾಡಿದೆ. ಹಾಗೆಯೇ, ತನಗೆ ಇನ್ನೂ ಮದುವೆ ಆಗಿಲ್ಲವಲ್ಲಾ ಎಂದು ಕೊರುಗುತ್ತಿರುವ ನನ್ನ ತಂಗಿ ಮುಖದಲ್ಲಿ ಮಂದಹಾಸ ನೋಡಲು ಕಂಕಣ ಬದ್ಧನಾದೆ. ನನ್ನ ಮನಸನ್ನು ಒಂದು ಬಿಳಿ ಹಾಳೆಯಾಗಿ ಪರಿವರ್ತನೆ ಮಾಡಿದೆ. ಆದರೂ, ನಮ್ಮ ತಂದೆಯವರು ಅದೆಷ್ಟೋ ಸಂಬಂಧಗಳು, ಅವರ ಹುಡುಗಿ ಅಷ್ಟು ಚೆನ್ನಾಗಿಲ್ಲವೆಂದು ತಾವಾಗಿಯೇ ಒಪ್ಪಲಿಲ್ಲ. ಈ ಬೆಳವಣಿಗೆ ನಡುವೆ, ನನಗೆ ದಾವಣಗೆರೆಯಿಂದ ಬೆಳಗಾವಿ, ಬೆಳಗಾವಿ ಯಿಂದ ಬೆಂಗಳೂರಿಗೆ ವರ್ಗಾವಣೆ ಆಯಿತು. ೧೦-೧೨-೧೯೮೭ ದಿಂದ ನಾನು ಬೆಂಗಳೂರು ನಿವಾಸಿ ಆದೆ. ಬೆಂಗಳೂರಿಗೆ ಬಂದ ಮೇಲೆ, ನನ್ನ ತಂಗಿಗೆ ಒಂದು ಮದುವೆ ಸಂಬಂಧ ಗೊತ್ತಾಯಿತು. ಎರಡು ಕಡೆ ಇಷ್ಟವೂ ಆಯಿತು. ಆದರೆ, ಅವರ ಮನೇಲಿ ಮದುವೆ ಆಗಬೇಕಾದ ಹುಡುಗಿ ಇತ್ತು. ನಮ್ಮ ಹುಡುಗಿಯನ್ನು ನಿಮ್ಮ ಹುಡುಗನಿಗೆ ಮಾಡುಕೊಳ್ಳಿ. ನಿಮ್ಮ ಹುಡುಗಿಯನ್ನು ನಮ್ಮ ಹುಡುಗನಿಗೆ ಮಾಡುಕೊಳ್ಳುತ್ತೀವಿ, ಎಂದರು. ಆ ನಿಟ್ಟಿನಲ್ಲಿ ನಮ್ಮ ತಂದೆಯವರು ನನಗೆ ಹೀಗೆ ಪತ್ರ ಬರೆಯುತ್ತಾರೆ. "ಆ ಹುಡುಗಿಯನ್ನು ನಾವು ನೋಡಿದ್ದೇವೆ. ಚೆನ್ನಾಗಿದ್ದಾಳೆ. ಆದರೂ, ನಿನಗೆ ಇಷ್ಟವಾದರೆ ಮಾತ್ರ ಮುಂದುವರಿಯೋಣ". ಅದಕ್ಕೆ ಮುಂಚೆ ನಮ್ಮ ತಂದೆಯವರೇ, ಅದೆಷ್ಟೋ ಸಂಬಂಧಗಳು ಬೇಡವೆಂದಿದ್ದರು. ಹಾಗಾಗಿ, ನಮ್ಮ ತಂದೆಯವರ ಮೇಲೆ ನನಗೆ ಅಪಾರ ಗೌರವ, ನಂಬಿಕೆ. ತಂದೆಯವರಿಗೆ ಪತ್ರ ಬರೆದೆ."ನಿಮಗೆ ಒಪ್ಪಿಗೆ ಆಗಿದೆ ಎಂದರೆ, ನನಗೂ ಒಪ್ಪಿಗೆ ಆದಹಾಗೆಯೇ. ನಾನು ಅವರ ಹುಡುಗಿಯನ್ನು ನೋಡುವ ಅವಶ್ಯಕತೆ ಇಲ್ಲ. ಆದರೂ, ನಿಮ್ಮ ತೃಪ್ತಿಗಾಗಿ ನಾನು ಹುಡುಗಿಯನ್ನು ನೋಡಲು ಬರುತ್ತೇನೆ". ಆದರೆ, ನಾನು ಹುಡುಗಿಯನ್ನು ಸರಿಯಾಗಿ ನೋಡಿದ್ದು ಹಸೇಮಣೆ ಮೇಲೆ. ನನ್ನ ತಂಗಿ ಮದುವೆ ಮುಹೂರ್ತ ಬೆಳಗಿನ ಜಾವ. ಅವಳ ಕತ್ತಲ್ಲಿ ತಾಳಿ ಬಿದ್ದ ಮೇಲೆ, ಅವಳ ತುಟಿಯಮೇಲೆ ತೃಪ್ತಿಯ ಮಂದಹಾಸ ನನಗೆ ಮಾತ್ರ ಕಾಣಿಸುತ್ತಿತ್ತು. ಅವಳ ಹಿರಿಯ ಅಣ್ಣನಾಗಿ ನನ್ನ ಜನ್ಮಸಾರ್ಥಕವೆನಿಸಿತು. ನನಗೆ ಜನ್ಮಕೊಟ್ಟ ತಂದೆ ತಾಯಿ ಋಣ ತೀರಿಸುವ ಅದೃಷ್ಟ ನನ್ನದಾಗಿತ್ತು. ನಮ್ಮೆಲ್ಲರ ಒಳ್ಳೇ ಆಲೋಚನೆಗಳಂತೆ, ಎರಡು ಕುಟುಂಬಗಳು ಚೆನ್ನಾಗಿದ್ದೀವಿ.
ಕಾಲಚಕ್ರ ಗಿರ ಗಿರ ತಿರುಗಿತು. ಇಲ್ಲಿಯ ತನಕ ನಾನು ಹೇಳದಿರುವುದು ನನಗಿರುವ "ಒಳ ಅರಿವು (Intuition)" ಬಗ್ಗೆ. ಇದೇ ನನ್ನ ಈ ಲೇಖನಕ್ಕೆ ರೋಚಕ ತಿರುವು. ಸಾಧಾರಣವಾಗಿ ನಾವು ಎಲ್ಲರೂ ಆಕಾಶವಾಣಿ ಮಾತನಾಡುವುದು ನೋಡಿದ್ದು, ಸಿನಿಮಾಗಳಲ್ಲಿ ಮಾತ್ರ.
೩-೧೧-೨೦೦೭ ಬೆಳಗಿನ ಜಾವ ನನಗೆ ಒಂದು ಕನಸು. ಕನಸಿನಲ್ಲಿ ಆಕಾಶವಾಣಿ ಕೂಗು "ಶೀಘ್ರದಲ್ಲೇ ನಿನಗೆ ಪಿತೃವಿಯೊಗ ಆಗಲಿದೆ". ಭೂಕಂಪದ ಅನುಭವವಾಯಿತು. ಶನಿವಾರ ಕಾರ್ಯಾಲಯಕ್ಕೆ ರಜಾ ದಿನವಾದ್ರೂ, ಹೋಗಬೇಕಾದ ಪರಿಸ್ಥಿತಿ. ಕನಸಿನ ಪ್ರಭಾವದಿಂದ ಮನಸ್ಸು ಪೂರ್ತಿ ಅಲ್ಲೋಲಕಲ್ಲೋಲ. ಆ ಪರಿಸ್ಥಿತಿಯಲ್ಲಿ ನನ್ನ ೧೦ ವರ್ಷ ಹಳೆಯದಾದ ಬಜಾಜ್ ಚೇತಕ್ ನಲ್ಲಿ ಕಾರ್ಯಾಲಯಕ್ಕೆ ಹೋಗುವಾಗ, ಸಿಲ್ಕ್ ಬೋರ್ಡ್ ಫ್ಲ್ಯೆಓವರ್ ಬಳಿ ನನ್ನ ವಾಹನಕ್ಕೆ ಅಪಘಾತ ಸಂಭವಿಸಿತು. ಕಾರ್ಯಾಲಯಕ್ಕೆ ಹೋಗುವ ನಿರ್ಧಾರ ಬದಲಿಸಿ, ಬನ್ನೇರುಘಟ್ಟ ರಸ್ತೆ ಯಲ್ಲಿರುವ ಪಾಪುಲರ್ ಶೋರೂಂ ಗೆ ಹೋಗಿ, ಚೇತಕ್ ಬದಲಿಸಿ, ಬಜಾಜ್ ಪ್ಲಾಟಿನಂ ಬೈಕ್ ಬುಕ್ ಮಾಡಿದೆ.೬-೧೨-೨೦೦೭ ಬೈಕ್ ಪಡೆದು ಕೊಂಡೆ. ಆದರೆ, ಕನಸಿನಲ್ಲಿ ಕೇಳಿದ ಆಕಾಶವಾಣಿ ಸಂದೇಶ, ಯಾರಿಗೂ ಹೇಳಿಕೊಳ್ಳುವಂತಹದಲ್ಲ. ಮನಸಿನಲ್ಲೇ ಕೊರಗುವಂತಾಯಿತು.ಈ ಕನಸಿನ ಸಂದೇಶದ ಒತ್ತಡ ಕಾರ್ಯಾಲಯದ ಕೆಲಸದ ಒತ್ತಡ, ಎರಡೂ ಸೇರಿ, ಬೆಂಕಿ ಬಿರುಗಾಳಿ ಒಂದಾದಂತಾಯಿತು. ತಿಂಗಳು ಕಳೆಯೋಷ್ಟರಲ್ಲಿ, ಮಧುಮೇಹ ವಾಗಿ ಪರಿವರ್ತಿಸಿತು. ರಜೆ ಹಾಕಿ, ತಂದೆಯವರು ಇರುವ ಅನಂತಪುರಕ್ಕೆ ತೆರಳಿದೆ. ೨೧-೧೨-೨೦೦೭ ನನ್ನ ೫೧ನೆ ಜನ್ಮದಿನದಂದು, ಆಶೀರ್ವಾದ ಪಡೆಯಲು ತಂದೆತಾಯಿ ಕಾಲಿಗೆ ನಮಸ್ಕರಿಸಿದಾಗ, ನನ್ನ ತಂದೆ ಯವರು ನನ್ನ ಅಪ್ಪಿಕೊಂಡು, ನನ್ನ ಕಣ್ಣಮುಂದೇನೆ ನಿನಗೆ ಮಧುಮೇಹ ಬಂತಲ್ಲಾ ಎಂದು ಕೊರಗಿದರು. ನನ್ನ ತಂದೆ ತಾಯಿ ಜೊತೆಯಲ್ಲೇ ಡಿಸೆಂಬರ್, ಜನವರಿ ತಿಂಗಳು ಕಳೆಯಿತು. ೬-೨-೨೦೦೮ ದಿನಾಂಕ ಬೈಕ್ ೨ನೆ ಫ್ರೀ ಸರ್ವೀಸ್ ಸಲುವಾಗಿ ಬೆಂಗಳೂರಿಗೆ ಬಂದೆ. ೭-೨-೨೦೦೮ ದಿನಾಂಕ ಬೈಕ್ ಸರ್ವಿಸ್ ಮುಗಿಯಿತು. ೮-೨-೨೦೦೮ ಮಧ್ಯಾಹ್ನ ಪುನಃ ಅನಂತಪುರಕ್ಕೆ ತೆರಳಿದೆ. ಬಸ್ ಹಿಂದೂಪುರ ತಲುಪಿದಾಗ ಸಂಜೆ ಸುಮಾರು ೬ ಘಂಟೆ ಆಗಿತ್ತು. ಅಲ್ಲಿ ರಾಸ್ತಾರೋಕೋ ನಡಿಯುತ್ತಿತ್ತು. ಒಂದು ಘಂಟೆ ಕಳೆದರೂ, ಯಾವ ವಾಹನಗಳೂ ಅನಂತಪುರ ಹೋಗುವ ಸೂಚನೆ ಕಾಣಲಿಲ್ಲ. ದಾರಿಯಿಲ್ಲದೆ, ಹಿಂದೂಪುರದಲ್ಲಿ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿ ಹೇಗೋ ಆ ದಿನ ರಾತ್ರಿ ಕಳೆದೆ. ೯-೨-೨೦೦೮ ಬೆಳಿಗ್ಗೆ ೮-೩೦ ಘಂಟೆಗೆಲ್ಲಾ ಅನಂತಪುರ ಸೇರಿದೆ. ಮನೆಗೆ ಹೋದಕೂಡಲೆ ಬಟ್ಟೆ ಬದಲಾಯಿಸಿ, ಮಂಚದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ನಮ್ಮ ತಂದೆಯವರ ಪಕ್ಕದಲ್ಲಿ ಕುಳಿತು ಕೊಂಡೆ. ಆವತ್ತು ಎರಡನೇ ಶನಿವಾರ. ರಜೆ ದಿನ. ಆದರೂ ನನ್ನ ಮೂರು ಜನ ತಮ್ಮಂದಿರು ಏನೋ ಕೆಲಸ, ಮನೆಯಿಂದ ಹೊರಗೆ ಹೂಗಿದ್ದರು. ಮಧ್ಯಾಹ್ನ ಸುಮಾರು ೧೨ ಘಂಟೆ ಸಮಯ. ನಮ್ಮ ತಂದೆಯವರಿಗೆ ನನ್ನ ಕೈಯಾರೆ ಸ್ವಲ್ಪ ಹಾಲು ಕುಡಿಸಿದೆ. ನಮ್ಮ ತಾಯಿ, ತಂಗಿ, ನಾದಿನಿ ಅವರಿಗೆ ಊಟ ಮಾಡಲು ಹೇಳಿದೆ. ಸುಮಾರು ಒಂದು ಗಂಟೆಯ ಸಮಯ. ನಮ್ಮ ತಂದೆಯವರು ಮುಗುಳ್ನಗೆ ಬೀರುತ್ತಾ ನನ್ನ ಕಡೆ ಎರಡು ಕೈ ಗಳಿಂದ ಅಪ್ಪಿಕೊಂಡರು. ಅವರು ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಘಂಟಸಾಲ ಅವರು ಹಾಡಿರುವ ಭಗವದ್ಗೀತೆ ಕೇಳುತ್ತಿದ್ದರು. ತಂದೆ ಯವರ ಬಲಗೈ ನನ್ನ ಎಡಗೈಯಲ್ಲಿ ಇತ್ತು. ನನ್ನ ಬಲಗೈ ಬೆರಳುಗಳಿಂದ ನನ್ನ ತಂದೆಯವರ ತಲೆ ಕೂದಲು ಸವರುತ್ತಾ, ಅವರ ಎದೆಯನ್ನು ನಿಮುರುತ್ತಾ ಇದ್ದೆ. ೧-೧೫ ಸಮಯ, ನನ್ನ ಹೆಸರು ಕೂಗಿದರು. ನನ್ನ ಕಣ್ಣ ಮುಂದೆ, ನನ್ನ ಕೈಯಲ್ಲೇ, ಎರಡೂ ಕಣ್ಣು ತೆಗೆದರು. ಬಾಯಿ ತೆಗೆದುಕೊಂಡಿತು. ನನ್ನ ಪ್ರೀತಿ ಪಾತ್ರ ರಾದ ತಂದೆಯವರು ದೈಹಿಕವಾಗಿ ನಮ್ಮನ್ನಗಲಿದರು. ತಂದೆಯ ಪಾತ್ರಧಾರಿ ಸಾವನ್ನಪ್ಪುವುದು ಎಲ್ಲೋ ಸಿನಿಮಾಗಳಲ್ಲಿ ಮಾತ್ರ ನೋಡಿರಬಹುದು. ಆದರೆ, ನನಗೆ ನಿಜ ಜೀವನದಲ್ಲಿ ಆ ಕಹಿ ಅನುಭವ ಆದಾಗ, ನಂಬಲು ಸಾಧ್ಯವಾಗಲಿಲ್ಲ. ಭೂಮಿ ಆಕಾಶ ಏಕವಾದಂತಾಯಿತು. ಎರಡು ಕಣ್ಣುಗಳು ನೀರು ತುಂಬಿದ ಕೊಳವೆಬಾವಿ ಆಗಿತ್ತು 😢😢
Comments
Post a Comment