ನಾನು ಕಂಡ ರವಿ ಬೆಳಗೆರೆ
ನನಗೆ ರವಿ ಬೆಳಗೆರೆ ಅವರ ಹೆಸರು ಪರಿಚಯ ಆಗಿದ್ದು, ಅವರ "ಹಾಯ್ ಬೆಂಗಳೂರು" ಪತ್ರಿಕೆ ಮೂಲಕ. ಅದರಲ್ಲೂ ನಾನು ಎಲ್ಲಿಯಾದರೂ ಪ್ರಯಾಣ ಮಾಡುವಾಗ, "ಹಾಯ್ ಬೆಂಗಳೂರು" ಪತ್ರಿಕೆ ಕೊಳ್ಳುವುದು ನನ್ನ ಮುಖ್ಯ ಹವ್ಯಾಸವಾಗಿತ್ತು. ನಂತರ ದಿನಗಳಲ್ಲಿ ಗೊತ್ತಾಯಿತು, ರವಿ ಬೆಳಗೆರೆ ಅವರು ನನ್ನ ಇಲಾಖೆಯ ಸಹೋದ್ಯೋಗಿಯ ಕಜಿನ್ ಅಂತ. ನನ್ನ ಸಹೋದ್ಯೋಗಿ ನನ್ನ ದೂರದ ಸಂಬಂಧೀಕರಾಗಿರುವುದಿರಿಂದ, ರವಿ ಬೆಳಗೆರೆ ಅವರು ಸಹಾ ನನಗೆ ಸಂಬಂಧೀಕರಾಗುತ್ತಾರೆ ಅಂತ ಒಂದು ಹೆಮ್ಮೆಯ ಭಾವನೆ. ನನ್ನ ಸಹೋದ್ಯೋಗಿ ಮೂಲಕ ಒಂದೆರಡು ಬಾರಿ, ತೆಲುಗು ಭಾಷೆಯ ತುಂಬಾ ಹಳೇ ಕಾಲದ ಪುಸ್ತಕ, ರವಿ ಬೆಳಗೆರೆ ಅವರಿಗೆ ಕಳಿಸಿದ್ದು ಉಂಟು. ರವಿ ಬೆಳಗೆರೆ ಅವರು ನನ್ನನ್ನು ಅವರ ಪತ್ರಿಕಾ ಕಚೇರಿಗೆ ಕರೆತರಲು, ನನ್ನ ಸಹೋದ್ಯೋಗಿ ಮೂಲಕ ಎರಡು ಮೂರು ಬಾರಿ ಸಂದೇಶ ಕಳಿಸಿದ್ದೂ ಹೌದು. ಕಾರಣಾಂತರಗಳಿಂದ, ರವಿ ಬೆಳಗೆರೆ ಅವರನ್ನು ನೋಡಲು ಹೋಗಲು ಆಗಲಿಲ್ಲ. ೨೦೦೮ ಇಸವಿಯಲ್ಲಿ, ನನ್ನ ಹಿರಿಯ ಮಗನನ್ನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇರಿಸಲು ಬೇಕಾದ ಹಣವನ್ನು ಜೋಡಿಸಲು ಪರದಾಡುತ್ತಿದ್ದೆ. ಆ ಸಮಯದಲ್ಲಿ ರವಿ ಬೆಳಗೆರೆ ಅವರು ತನ್ನ ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ನನಗೆ ಖುದ್ದಾಗಿ ಕೊಡಲು, ನನ್ನನ್ನು ಅವರ ಪತ್ರಿಕಾ ಕಚೇರಿಗೆ ಕರೆತರಲು ನನ್ನ ಸಹೋದ್ಯೋಗಿಗೆ ಹೇಳ್ತಾರೆ. ಮರುದಿನ ಬೆಳಿಗ್ಗೆ ನಾನು ರವಿಬೆಳಗೆರೆ ಕಚೇರಿಗೆ ಹೋದಾಗ, ಅವರ ಮುಖಾಮುಖಿ ಪರಿಚಯ ಆಯಿತು. ಅವರ ಜೊತೆ ಇಡ್ಲಿ ವಡೆ ಸಾಂಬಾರ್, ಬಿಸಿ ಬಿಸಿ ಕಾಫಿ ಸೇವನೆಯೂ ಆಯಿತು. ಅವರ ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ನನಗೆ ಕೊಟ್ಟು, ಖಂಡಿತ ವಾಗಿ ಮದುವೆಗೆ ಬರಲು ಹೇಳಿದರು. ಇನ್ನೇನು, ಅಲ್ಲಿಂದ ಹೊರಡಲು ಸಿದ್ಧವಾದಾಗ, ಒಂದು ನಿಮಿಷ ಕೂಡಲು ಹೇಳಿ, ಟೇಬಲ್ ಡ್ರಾಯರ್ ತೆಗೆದು, ಒಂದು ಲಕ್ಷ ರೂಪಾಯಿ ನನ್ನ ಮುಂದೆ ಇಟ್ಟರು. ನನ್ನ ಮುಖದ ಮೇಲೆ ಪ್ರಶ್ನಾರ್ಥಕ ನೋಡಿ, ನೀವು ಕೇಂದ್ರ ಸರ್ಕಾರದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಹಾ, ಹಣದ ತೊಂದರೆ ಅನುಭವಿಸುತ್ತಿದ್ದೀರಿ ಎಂದರೇ ನಿಮ್ಮ ಕರ್ತವ್ಯ ಮೌಲ್ಯಗಳನ್ನು ಮೆಚ್ಚಲೇ ಬೇಕಾಗುವ ವಿಷಯ. ಅದಲ್ಲದೆ, ನನ್ನ ಅತ್ತಿಗೆಯ ಚಿಕಿತ್ಸೆಯ ಸಲುವಾಗಿ ಖರ್ಚಾಗಿರುವ ಲಕ್ಷಾಂತರ ರೂಪಾಯಿ ಕೇವಲ, ನಿಮ್ಮ ಮಾರ್ಗದರ್ಶನ ಮೂಲಕವೇ, ಕಚೇರಿ ಯಿಂದ ತನಗೆ ವಾಪಸು ಬಂದಿರುವುದಾಗಿ, ನನ್ನ ಕಜಿನ್ ಹೇಳಿದರು. ನಿವು ನಮ್ಮ ಅತ್ತಿಗೆಯವರಿಗೆ ಸಹಾಯ ಮಾಡಿರುವಿರಿ. ನಾನು ನಿಮ್ಮ ಮಗನಿಗೆ ಸಹಾಯ ಮಾಡ್ತಾಇದ್ದೀನಿ. ನಿಮ್ಮ ಮಗ ಮತ್ತೊಬ್ಬರಿಗೆ ಸಹಾಯ ಮಾಡುತ್ತಾನೆ. ಇದೇ ಜೀವನ ಚಕ್ರ ಎಂದರು.
ನಾನು ಮೂಕಸ್ಮಿಕನಾಗಿ ಕುಳಿತಿದ್ದೆ. ನಮ್ಮಿಂದ ಕೆಲವರು ಸಹಾಯ ಪಡೆದು ಕೊಂಡರೂ, ಎದುರಾದರೆ ನಾವು ಅವರನ್ನು ಏನಾದರೂ ಕೇಳುತ್ತೇವೋ ಎಂದು ಮುಖ ಮರಚುವ ಪ್ರಯತ್ನ ಮಾಡುವ ಈ ದಿನಗಳಲ್ಲಿ, ಸಹಾಯ ಕೇಳದಿದ್ದರೂ ಸಹಾ, ನನ್ನ ಆವಶ್ಯಕತೆಯನ್ನು ಬೇರೆಯವರ ಮೂಲಕ ಅರಿತು, ಸಹಾಯ ಮಾಡಿರುವ ರವಿ ಬೆಳಗೆರೆ ಅವರು ನನಗೆ ಆ ಕ್ಷಣದಲ್ಲಿ ಮೇರು ಪರ್ವತ ವಾಗಿ ಕಂಡರು. ನನ್ನ ಹೆಂಡತಿ ಯಾವಾಗಲೂ ನನ್ನನ್ನು ಒಂದು ಪ್ರಶ್ನೆ ಕೇಳುತ್ತಿದ್ದಳು. ನೀವು ನಾಳೆಯ ಬಗ್ಗೆ ಯೋಚನೆಯೇ ಮಾಡುವುದಿಲ್ಲಾ, ಯಾಕೆ ಅಂತ. ಸಂಬಳ ಮುಷ್ಟಿಯಷ್ಟು , ಭಾಧ್ಯತೆ, ಖರ್ಚು ಬೆಟ್ಟದಷ್ಟು ಇರುವ ನನ್ನಂತವರಿಗೆ, ದೇವರೇ ಆಸರೆ. ರವಿ ಬೆಳಗೆರೆ ಅವರು ನನಗೆ ಸಹಾಯ ಮಾಡಿದ್ದು ಕಂಡು "ದೈವಂ ಮಾನುಷ ರೂಪೇಣಾ" ಅಂತ ಹಿರಿಯರು ಹೇಳಿದ ಮಾತು ಅದೆಷ್ಟು ನಿಜಾ ಅಂತ ಅನ್ನಿಸಿತು. ಕೆಲವು ದಿನಗಳ ನಂತರ ಅವರು ಕೊಟ್ಟ ಹಣವನ್ನು ನಾನು ಹಿಂದಿರುಗಿಸಿದೆ. ಅದು ಬೇರೆ ವಿಷಯ. ಇಲ್ಲಿ ನಾನು ಹೇಳಲು ಹೊರಟಿರುವುದು, ರವಿ ಬೆಳಗೆರೆ ಅವರ ಮೇರು ವ್ಯಕ್ತಿತ್ವದ ಬಗ್ಗೆ. ಅವರ ದಯಾ ಗುಣದ ಬಗ್ಗೆ. ತುಂಬು ಹೃದಯದಿಂದ ರವಿ ಬೆಳಗೆರೆ ಅವರು ನನ್ನ ಮಗನ ಓದಿಗೆ ಹಾಕಿದ ಅಡಿಪಾಯ, ಇವತ್ತು ಒಳ್ಳೇ ಫಲವನ್ನು ನೀಡಿದೆ. ನನ್ನ ಮಗ ಚೆನ್ನಾಗಿ ಓದಿ ಪ್ರಯೊಜಕನಾಗಿದ್ದಾನೆ. ಆವತ್ತು ರವಿ ಬೆಳಗೆರೆ ಅವರು ಹೇಳಿದಂತೆ, ಕೆಲವರಿಗೆ ದಾರಿದೀಪವಾಗಿದ್ದಾನೆ. ಆಕಾಶದಲ್ಲಿರುವ ಆ ರವಿ ಕಾಣದ್ದು, ಭೂಮಿಯಮೇಲೆ ಕವಿಯಾಗಿದ್ದ ಈ ರವಿ ಕಂಡ. ನಾವು ನೋಡುತ್ತಿದ್ದಹಾಗೆ, ನಮ್ಮ ನಡುವೆ ಭೂಮಿ ಮೇಲೆ ಇದ್ದ ಈ ರವಿ ಕಣ್ಮರೆ ಆಗಿ, ಆಕಾಶದಲ್ಲಿ ಇರುವ ಆ ರವಿಯಲ್ಲಿ ಐಕ್ಯವಾದ. ಟೆಲಿವಿಷನ್ ನಲ್ಲಿ ಪ್ರಸಾರವಾದ ರವಿ ಬೆಳಗೆರೆ ಅವರ ಅಂತಿಮ ಯಾತ್ರೆ ನೋಡುತ್ತಾ, ಅಶ್ರುತರ್ಪಣ ನೀಡಿದೆ.
ರವಿ ಬೆಳಗೆರೆ ಅವರು ದೈಹಿಕವಾಗಿ ದೂರವಾದರೂ, ನನ್ನ ನೆನಪಿನಂಗಳದಲ್ಲಿ ಎಲ್ಲಕಾಲವೂ ಉಳಿಯುತ್ತಾರೆ.

Comments
Post a Comment